ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಕಾಲೊಟೈಪ್ ಮುದ್ರಣ

 ಸಮತಲ ತಳಹದಿಯ ಮುದ್ರಣಕ್ಕೆ ಸೇರಿದ ಒಂದು ವಿಧಾನ. ಇದರಲ್ಲಿ ಶಿಲಾಮುದ್ರಣ ಮತ್ತು ಛಾಯಾಗ್ರಹಣವನ್ನು ಉಪಯೋಗಿಸಿಕೊಂಡು ಬಹಳ ಉತ್ಕøಷ್ಟವಾದ ಚಿತ್ರಗಳನ್ನೂ ಕಲಾಕೃತಿಗಳನ್ನೂ ಮುದ್ರಿಸುತ್ತಾರೆ.  ಕಾಲೋಟೈಪ್ ಮುದ್ರಣವನ್ನು ಮೊಟ್ಟಮೊದಲು ಫ್ರಾನ್ಸ್ ದೇಶದಲ್ಲಿ ಟಿ. ಡು. ಮೊಟೀ ಮತ್ತು ಸಿ.ಆರ್. ಮಾರಿಚಾಲ್ ಎಂಬುವರು 1865ರಲ್ಲಿ ಪ್ರಾರಂಭಿಸಿದರು ಅರ್ನೆಸ್ಟ್ ಎಡ್ವಡ್ರ್ಸ್ ಎಂಬಾತ ಅಮೇರಿಕದಲ್ಲಿ 1872ರಲ್ಲಿ ಪ್ರಾರಂಭಿಸಿದ.

 ಕಾಲೊಟೈಪ್ ವಿಧಾನದಲ್ಲಿ ಮುದ್ರಣ ಮಾಡಬೇಕಾದ ಚಿತ್ರ ಅಥವಾ ಬೇರೆ ವಸ್ತುವಿನ ಋಣಚಿತ್ರವನ್ನು ಸಾಧಾರಣ ರೀತಿಯಲ್ಲಿ ತಯಾರಿಸಿ ಅದರಲ್ಲಿರುವ ತಿರೇಕಗಳನ್ನು ತಿದ್ದಿ ಇಟ್ಟುಕೊಳ್ಳಬೇಕು. ಅರ್ಧ ಇಂಚು ದಪ್ಪವಿರುವ ಒಂದು ಗಾಜಿನ ಹಲಗೆಯನ್ನು ಚೆನ್ನಾಗಿ ತೊಳೆದು ಅದರ ಮೇಲೆ ಭದ್ರವಾಗಿ ಅಂಟಿಕೊಳ್ಳುವ ಒಂದು ದ್ರವವನ್ನು ಲೇಪಿಸಿ ಒಲೆಯ ಮೇಲೆ ಒಣಗಿಸಬೇಕು ಇದರ ಮೇಲೆ ಜೆಲೆಟಿನ್, ನೀರು ಮತ್ತು ಬೈಕ್ರೋಮೇಟ್ ಸೇರಿಸಿದ ದ್ರಾವಣವನ್ನು ಹರಿಬಿಟ್ಟು ಅದು ಹಲಗೆಯ ಮೇಲೆಲ್ಲ ಒಂದೇ ಸಮವಾಗಿರುವ ಹಾಗೆ ನೋಡಿಕೊಂಡು ಒಲೆಯ ಮೇಲೆ ಕಾಯಿಸಿ ಆರಿಸಬೇಕು. ಆಗ ಅದು ಪ್ರಕಾಶ ಸಂವೇದಕ (ಲೈಟ್ ಸೆನ್ಸಿಟವ್) ಸ್ವಭಾವವನ್ನು ಹೊಂದುತ್ತದೆ. ಇದನ್ನು ಕತ್ತಲೆಯಲ್ಲಿ ಕಪ್ಪು ಕಾಗದ ಅಥವಾ ಬಟ್ಟೆಯಲ್ಲಿ ಸರಿಯಾಗಿ ಮುಚ್ಚಿಡಬೇಕು. ಹೀಗೆ ತಯಾರಿಸಿದ ಗಾಜಿನ ಹಲಗೆಯ ಮೇಲೆ ಛಾಯಾಗ್ರಹಣ ಋಣಫಲಕವನ್ನು ಇಟ್ಟು ತೀಕ್ಷಣವಾದ ಕಿರಣಗಳು ಅದರ ಮೇಲೆ ಪ್ರವಹಿಸುವಂತೆ ಬಿಡಬೇಕು. ಋಣಫಲಕದಲ್ಲಿ ಎಲ್ಲೆಲ್ಲಿ ಕಪ್ಪು, ಬಿಳುಪು ಸಮ್ಮಿಶ್ರವಾಗಿಯೋ ಅಲ್ಲಿ ಕಿರಣಗಳು ಅರ್ಧಂಬರ್ಧ ಪ್ರವೇಶಿಸಿ ಜೆಲೆಟಿನ್ನನ್ನು ಅಲ್ಪಸ್ವಲ್ಪ ಗಟ್ಟಿ ಮಾಡುತ್ತವೆ. ಮತ್ತು ಋಣಫಲಕದಲ್ಲಿ ಎಲ್ಲೆಲ್ಲಿ ಬಿಳುಪು ಹೆಚ್ಚಾಗಿದೆಯೋ ಅಲ್ಲಿ ಕಿರಣಗಳು ಪೂರ್ಣವಾಗಿ ಪ್ರವೇಶಿಸಿ ಜೆಲೆಟಿನ್ನಿನ ಮೇಲೆ ಪ್ರಭಾವ ಬೀರಿ ಅದನ್ನು ಚೆನ್ನಾಗಿ ಗಟ್ಟಿಮಾಡುತ್ತವೆ. ಈ ಉಪವಿಧಾನಕ್ಕೆ ಬೆಳಕಿಗೆ ಒಡ್ಡುವುದು ಎಂದು ಹೆಸರು. ಇದಾದ ಮೇಲೆ ಗಾಜಿನ ಹಲಗೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆಯುವುದರಿಂದ ಗಟ್ಟಿಯಾಗದೆ ಇರುವ  ಜಿಲೆಟಿನ್ ವಸ್ತುವೆಲ್ಲ ಕರಗಿಹೋಗಿ ಗಟ್ಟಿಯಾಗಿರುವ ಮತ್ತು ಅರ್ಧ ಗಟ್ಟಿಯಾಗಿರುವ ಜೆಲೆಟಿನ್ ಮಾತ್ರ ಉಳಿದುಕೊಳ್ಳುತ್ತದೆ. ಇದು ಬತ್ತಿದ ಕೆರೆಯಂಗಳದಲ್ಲಿ ಕೆಲವು ಕಡೆ ಆಳವಾದ  ಕೆಲಕಡೆ ಆಳವಿಲ್ಲದ ಹಳ್ಳಗಳೂ ಇನ್ನೂ ಕೆಲವು ಕಡೆ ಮಟ್ಟದ ನೆಲವಿರುವ ಹಾಗೆ ಕಾಣುತ್ತದೆ. ಇದನ್ನು ಮುದ್ರಣ ಫಲಕವನ್ನಾಗಿ ಉಪಯೋಗಿಸುತ್ತಾರೆ.

 ಈ ತರಹೆಯ ಮುದ್ರಣ ಫಲಕವನ್ನು ಮುದ್ರಣ ಯಂತ್ರಕ್ಕೆ ಜೋಡಿಸಿ ಇದರ ಮೇಲೆ ಮಸಿಲೇಪನ ಉರುಳೆಗಳಿಂದ ಇದಕ್ಕೆ ಸರಿಯಾಗಿ ವಿಶೇಷವಾಗಿ ತಯಾರಿಸಿದ ಮಸಿಯನ್ನು ಲೇಪಿಸಿದಾಗ ಮಸಿ ಆಳವಾದ ಹಳ್ಳಗಳಿರುವ ಪ್ರದೇಶಗಳಲ್ಲಿ ಹೆಚ್ಚಾಗಿಯೂ ಆಳವಿಲ್ಲದ ಪ್ರದೇಶಗಳಲ್ಲಿ ಸ್ವಲ್ಪವಾಗಿಯೂ ಮಟ್ಟ ಪ್ರದೇಶಗಳಲ್ಲಿ ಅತಿ ವಿರಳವಾಗಿಯೂ ಉಳಿಯುತ್ತದೆ. ಇದರ ಮೇಲೆ ಕಾಗದದ ಹಾಳೆಯನ್ನಿಟ್ಟು ಒತ್ತಡ ಉರುಳೆಯಿಂದ ಒತ್ತಿದರೆ ಗಾಜಿನ ಪ್ಲೇಟಿನ ಮೇಲಿರುವ ಮಸಿ ಕಾಗದದ ಮೇಲೆ ಬಂದು ಛಾಯಾಗ್ರಹಣ ಮಾಡಿದ ಚಿತ್ರ ಅಥವಾ ವಸ್ತು ಮುದ್ರಿಸಲ್ಪಡುತ್ತದೆ. ಇದರಲ್ಲಿ ಚಿತ್ರ ಅತಿ ಸೂಕ್ಷ್ಮವಾಗಿರುವ ಹಲವು ಗಾತ್ರದ ಚುಕ್ಕೆಗಳಿಂದ ಕೂಡಿರದೆ ಅಖಂಡವಾದ ಒಂದೇ ಛಾಯೆಯಿಂದ ಕೂಡಿರುತ್ತದೆ. ಮತ್ತು ಚಿತ್ರ ಬಹಳ ಸ್ವಾಭಾವಿಕವಾಗಿ ಕಾಣುತ್ತದೆ. ಈ ವಿಧಾನದಿಂದ ಬಹುವರ್ಣದ ಚಿತ್ರಗಳನ್ನು ಸಹ ಮುದ್ರಿಸಬಹುದು. ಆದರೆ ಇದರಿಂದ ಗಂಟೆಗೆ 200 ಪ್ರತಿಗಳನ್ನು ಮಾತ್ರ ಮುದ್ರಿಸಬಹುದು.

 1940ರಿಂದ ಈಚೆಗೆ ಗಾಜಿನ ಹಲಗೆಯ ಬದಲಾಗಿ, ತೆಳುವಾದ ಲೋಹದ ತಗಡುಗಳ ಮೇಲೆ ಮುದ್ರಣ ಫಲಕವನ್ನು ತಯಾರಿಸಿ ಅದರಿಂದ ಕಾಲೊಟೈಪ್ ಮುದ್ರಣ ಮಾಡಿ ಹೆಚ್ಚು ಪ್ರತಿಗಳನ್ನು ಮುದ್ರಿಸಬಹುದಾಗಿದೆ.

 

(ಡಿ.ಎಸ್.ಜಿ.)